ತಥಾಗತ

	ತಥಾಗತ ಎಂದರೆ ಸತ್ಯದ ದಾರಿಯನ್ನು ತುಳಿದು ಮೋಹ ಪ್ರಪಂಚವನ್ನು ತೊರೆದವನು ಎಂದು ಅರ್ಥ.

	ಬುದ್ಧನನ್ನು ಈ ಹೆಸರಿನಿಂದ ಸಂಬೋಧಿಸುವುದು ವಾಡಿಕೆ. ಬುದ್ಧ ಮಾನವನಾಗಿ ಹುಟ್ಟಿದರೂ ಅತ್ಯುಚ್ಚ ನೀತಿ, ಗುಣ, ಭೌದ್ಧಿಕ ಮಟ್ಟಗಳನ್ನು ಅರ್ಜಿಸಿ ಮಾನವ ಶ್ರೇಷ್ಠನಾದ. ಸತ್ಯದ ದಾರಿಯನು ಹಿಡಿದು ನಾಲ್ಕು ಆರ್ಯಸತ್ಯಗಳನ್ನು ಕಂಡುಕೊಂಡು ಸೋದರ ಮಾನವರಿಗೆ ದುಃಖದಿಂದ ಹೊರಬರುವ ಮಾರ್ಗವನ್ನು ಭೋದಿಸಿದ. ಸುಗತ ಎಂದರೂ ತಥಾಗತ ಎಂದೇ ಅರ್ಥ.

	ತಥಾಗತ ಭೋದಿಸಿರುವ ನಿಯಮಗಳು (ಧರ್ಮ) ಸತ್ಯವಾದುದೆಂದೇ ಬೌದ್ಧರ ನಂಬಿಕೆ.

	ಬರ್ನ್‍ಔಫ್ ಎಂಬ ಫ್ರೆಂಚ್ ವಿಧ್ವಾಂಸ ತಥಾಗತ ಎಂಬ ಪದವನ್ನು ತಥಾ ಅಗತ, ಹೀಗೆ ಬಂದವನು (ಆತನ ಹಿಂದೆ ಇದ್ದ ಬುದ್ಧರಂತೆ) ಎಂದೂ ತಥಾ ಗತ ಹಾಗೆ ಹೋದವನು (ಆತನ ಉತ್ತರಾಧಿಕಾರಿ ಬುದ್ಧರಂತೆ ) ಎಂದೂ ಅರ್ಥೈಸುತ್ತಾನೆ. ಬುದ್ಧ ಸರ್ವಾಂತರ್ಯಾಮಿಯಾದುದರಿಂದ ಆತ ಎಲ್ಲಿಗೂ ಹೋಗುವುದಿಲ್ಲವೆಂದೂ ಎಲ್ಲಿಂದಲೂ ಬರುವುದಿಲ್ಲವೆಂದೂ ಕೆಲವರು ವಾದ ಮಾಡುತ್ತಾರೆ.	
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ